ಬುಧವಾರ, ಅಕ್ಟೋಬರ್ 18, 2017

ಕನ್ನಡದಲ್ಲಿ 'ನ್ಯಾವಿಗೇಶನ್' ಹಾಗೂ 'ದನಿಯಿಂದ ಪಠ್ಯ' ತಂತ್ರಾಂಶಗಳು

ಮಾಹಿತಿ ತಂತ್ರಜ್ಞಾನ ದಿನದಿನಕ್ಕೂ ಹೊಸಹೊಸದನ್ನು ಹೊತ್ತು ತರುತ್ತಿರುವ ಕಾಲ ಇದು. ಕಂಪ್ಯೂಟರ್, ಅಂತರ್ಜಾಲ, ಸ್ಮಾರ್ಟ್ ಫೋನುಗಳು, Appಗಳು ಹೀಗೆ ಕಾಲಕಾಲಕ್ಕೆ ಗ್ಯಾಜೆಟ್ ಹಾಗೂ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಲೇ ಹೋಗುತ್ತಿದೆ. ಭಾಷೆಯ ಬಳಕೆ, ಬೆಳವಣಿಗೆಗೆ ಅದನ್ನು ಮಾಹಿತಿತಂತ್ರಜ್ಞಾನದಲ್ಲಿ ಅಳವಡಿಸುವುದೂ ಬಹಳ ಮುಖ್ಯವಾಗಿದೆ. ಹಾಗಾಗಿ ಈ ಹಿನ್ನೆಲೆಯಲ್ಲಿ ಇದರಲ್ಲಿ ಕನ್ನಡ ಭಾಷೆ ಅಳವಡಿಕೆಯಲ್ಲಾದ ಇತ್ತೀಚಿನ ಎರಡು ಬಹುಮುಖ್ಯ ಮೈಲಿಗಲ್ಲು ಎನ್ನಬಹುದಾದಂತಹ ಪ್ರಗತಿಯ ವಿಷಯಗಳನ್ನು ದಾಖಲಿಸಬೇಕಿದೆ.

೧. ಲಿಪಿಕಾರ್: ಇದೊಂದು ಧ್ವನಿಯಿಂದ ಪಠ್ಯ ಪರಿವರ್ತನಾ (speech to text) ತಂತ್ರಾಂಶ. ಅಂದರೆ ನಾವು ಮಾತಾಡಿದ್ದನ್ನು ಗ್ರಹಿಸಿ ಅದನ್ನು ಪಠ್ಯ ರೂಪಕ್ಕೆ ಪರಿವರ್ತಿಸಿ ಕೊಡುವುದು ಇದರ ಕೆಲಸ. ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಿಗಾಗಿ 2017ಜುಲೈಯಲ್ಲಿ ಬಿಡುಗಡೆಯಾಯ್ತು. ಆಂಡ್ರಾಯ್ಡ್ ಫೋನುಗಳಲ್ಲಿ ಈ ಕೀಬೋರ್ಡನ್ನು ಸಕ್ರಿಯಗೊಳಿಸಿಕೊಂಡು ಇದರಲ್ಲಿರುವ ಮೈಕ್ ಬಟನ್ ಆನ್ ಮಾಡಿಕೊಂಡು ನಮಗೆ ಏನು ಬರೆಯಬೇಕಿರುತ್ತದೋ ಅದನ್ನು ಮಾತಾಡಿದರೆ ಅಕ್ಷರ ರೂಪದಲ್ಲಿ ಟೈಪ್ ಮಾಡಿ ತೆರೆಯಮೇಲೆ ತೋರಿಸುತ್ತದೆ. ಇಂಗ್ಲೀಷ್ ಮುಂತಾದ ಭಾಷೆಗಳಿಗೆ ಈ ಸ್ಪೀಚ್ ಟು ಟೆಕ್ಸ್ಟ್ ತಂತ್ರಾಂಶಗಳು ಮೊದಲೇ ತಯಾರಾಗಿವೆ. ಆದರೆ ಕನ್ನಡಕ್ಕೆ ಇಷ್ಟು ನಿಖರತೆಯಿಂದ ಕೆಲಸ ಮಾಡುವ ತಂತ್ರಾಂಶ ಇದೇ ಮೊದಲು ಅಂತ ಹೇಳಬಹುದು. ಸ್ಪಷ್ಟವಾಗಿ ಮಾತಾಡಿದರೆ ಮತ್ತು ಪುಸ್ತಕರೂಪದ ಭಾಷೆಯಲ್ಲಿ ಮಾತಾಡಿದರಂತೂ ಇದರ ನಿಖರತೆ ಶೇ. ೯೫ ಕ್ಕೂ ಹೆಚ್ಚಿರುವುದು ಇದರ ವಿಶೇಷ. ಆ ಆಪ್ ಇಲ್ಲಿದೆLipikaar Kannada Keyboard.

೨. ವೇಜ್: ಜಿಪಿಎಸ್ ಆಧರಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಕಾಶೆಯಲ್ಲಿ ದಾರಿ ತೋರುವ ತಂತ್ರಾಂಶ ಇದು. ಇದು ಕೂಡ ಆಂಡ್ರಾಯ್ಡ್ ಫೋನುಗಳಿಗಾಗಿ ಇರುವ ಕಿರುತಂತ್ರಾಂಶವಾಗಿದ್ದು ನ್ಯಾವಿಗೇಶನ್ App ಎನ್ನುತ್ತಾರೆ. ಗೂಗಲ್ ಮ್ಯಾಪ್ ಹೆಚ್ಚಾಗಿ ಜನರಿಗೆ ಪರಿಚಿತ. ಈ ವೇಜ್ ಕೂಡ ಅದರಂತೆಯೇ ಕಾರ್ಯನಿರ್ವಹಿಸುವ ತಂತ್ರಾಂಶ.  2017ಜುಲೈಯಲ್ಲಿ ಇದರ ಕನ್ನಡ ಆವೃತ್ತಿ ಬಿಡುಗಡೆಯಾಯಿತು. ಇದರೊಂದಿಗೆ ಕನ್ನಡವು ನ್ಯಾವಿಗೇಶನ್ ತಂತ್ರಜ್ಞಾನಕ್ಕೂ ಕೂಡ ಯಶಸ್ವಿಯಾಗಿ ಅಳವಡಿಕೆಯಾಗಬಹುದೆಂಬುದು ಕೂಡ ಸಿದ್ಧಪಡಿಸಲ್ಪಟ್ಟಿತು. ದಾರಿ ಮತ್ತು ದೂರ ಮಾಹಿತಿ, ರಸ್ತೆಯಲ್ಲಿ ಚಲಿಸುವಾಗ ಎಲ್ಲಿ ತಿರುಗಬೇಕು, ಎಷ್ಟು ದೂರ ಹೋಗಬೇಕು ಮುಂತಾದ ಸೂಚನೆಗಳನ್ನು ಕನ್ನಡದ ಪಠ್ಯ ಮತ್ತು ದನಿಯಲ್ಲೇ ಪಡೆಯುತ್ತಾ ನ್ಯಾವಿಗೇಶನ್ ಮಾಡಲು ಇದರಲ್ಲಿ ಸಾಧ್ಯ. ಈ ತಂತ್ರಾಂಶವು ಜಗತ್ತಿನ ಹಲವಾರು ಭಾಷೆಗಳಲ್ಲಿದೆ. ಹೀಗೆ ವಿವಿಧ ಭಾಷೆಗಳಲ್ಲಿ ತಯಾರಾಗಲು ಅವರು Translifex ವೇದಿಕೆ ಮೂಲಕ ಕ್ರೌಡ್ ಸೋರ್ಸಿಂಗ್ ಮಾಡಿದ್ದಾರೆ. ಅಂದರೆ ಆಯಾ ಭಾಷೆಯ ಬಳಕೆದಾರರು ತಮ್ಮ ಭಾಷೆಯ ಆವೃತ್ತಿಗಳನ್ನು ತರಲು ಅನುವಾದಗಳ ಕೊಡುಗೆ ಮಾಡಬಹುದು, ಉತ್ತಮಗೊಳಿಸಬಹುದು. ಕನ್ನಡದ ಉತ್ಸಾಹಿ ಗೆಳೆಯರ ಸತತ ಪರಿಶ್ರಮದಿಂದ ಇದರ ಕನ್ನಡ ಆವೃತ್ತಿ ತಯಾರಾಗಿದೆ. ಅದು ಇಲ್ಲಿದೆ: Waze - Maps & Navigation


ಇದಾದ ಒಂದು ತಿಂಗಳ ನಂತರ, ಸೆಪ್ಟೆಂಬರಲ್ಲಿ ಗೂಗಲ್ ಮ್ಯಾಪ್ ನ್ಯಾವಿಗೇಶನ್ ಕೂಡ ಕನ್ನಡದಲ್ಲಿ ಸಾಧ್ಯವಾಗಿದೆ. ತಮ್ಮ ಗೂಗಲ್ ಖಾತೆಯ ಭಾಷೆಯನ್ನು ಕನ್ನಡವನ್ನಾಗಿ ಮಾಡಿಕೊಂಡವರಿಗೆ ನ್ಯಾವಿಗೇಶನ್ ಕೂಡ ಕನ್ನಡದಲ್ಲಿಯೇ ದೊರೆಯುತ್ತಿದೆ. ಗೂಗಲ್ ಕೂಡ ತನ್ನ ಅನೇಕ ಸೇವೆಗಳನ್ನು ಕ್ರೌಡ್ ಸೋರ್ಸ್ ಮಾಡಿರುವುದು ಮತ್ತು ಅದರಿಂದಲೇ ವಿವಿಧ ಭಾಷೆಗಳ ಆವೃತ್ತಿಗಳು ತಯಾರಾಗಿಬರುತ್ತಿರುವುದು ಇಲ್ಲಿ ಗಮನಾರ್ಹ.

ಮತ್ತೊಂದೆರಡು ಬೆಳವಣಿಗೆಗಳೆಂದರೆ,
 • 2017ಆಗಸ್ಟ್ ತಿಂಗಳಲ್ಲಿ ಗೂಗಲ್ 'ದನಿ ಹುಡುಕಾಟ'ವು (Google Voice Search) ಕನ್ನಡದಲ್ಲೂ ಸಾಧ್ಯವಾಗಿದೆ
 • 2017ಸೆಪ್ಟೆಂಬರಲ್ಲಿ ಬಿಡುಗಡೆಯಾದ ಐ ಓಸ್ ೧೧ ಆವೃತ್ತಿಯಲ್ಲಿ ಇನ್ ಬಿಲ್ಟ್ ಕನ್ನಡ ಕೀಬೋರ್ಡ್ ಒದಗಿಸಲಾಗಿದೆ. ಇದರಿಂದ ಐ ಫೋನ್ ಮತ್ತು ಐಪ್ಯಾಡ್ ಗಳಲ್ಲಿ ಯಾವ ಹೊರತಂತ್ರಾಂಶದ ಅಗತ್ಯವಿಲ್ಲದೇ ಕನ್ನಡ ಟೈಪಿಂಗ್ ಸಾಧ್ಯ.

ಇದರಿಂದ ಅರ್ಥವಾಗುವುದೇನೆಂದರೆ, ಭಾಷೆಯ ಬಳಕೆ ಹೆಚ್ಚಿದಷ್ಟೂ ಬೆಳವಣಿಗೆಯೂ ಸಾಧ್ಯ. ಹಾಗಾಗಿ ಆಸಕ್ತಿಯಿರುವವರು  ಕನ್ನಡಕ್ಕಾಗಿ ಈ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. (ಇಲ್ಲಿ ನೋಡಿ: ಕನ್ನಡ ಅನುವಾದಗಳ ಕ್ರೌಡ್ ಸೋರ್ಸಿಂಗ್)ಆಗದಿದ್ದವರು ಕೊನೇಪಕ್ಷ ತಾವು ಬಳಸುವ ಜಾಲತಾಣ, ಆಪ್ ಮುಂತಾದ ತಂತ್ರಜ್ಞಾನಗಳಲ್ಲಿ ಭಾಷೆಯನ್ನು ಕನ್ನಡಕ್ಕೆ ಮಾಡಿಕೊಂಡು ಬಳಸುವುದರ ಮೂಲಕ ಬಳಕೆದಾರರ ಸಂಖ್ಯೆ ಹೆಚ್ಚಿಸಿ ಬೆಳವಣಿಗೆಗೆ ಕಾರಣರಾಗಬಹುದು. 

ಶನಿವಾರ, ಏಪ್ರಿಲ್ 29, 2017

ಮರೀನಾ ಬೇ ಸ್ಯಾಂಡ್ಸ್ ಸ್ಕೈಪಾರ್ಕ್ - ಬಾನೆತ್ತರದಿಂದ ಸಿಂಗಾಪುರ ನೋಟಅದು ಭ್ರಾಮಕತೆಯನ್ನು ಮೀರಿಸುವ ವಾಸ್ತವ ಜಗತ್ತು. ನಕಾಶೆಯ ಗೆರೆಗಳಂತೆ ಕಾಣುವ ರಸ್ತೆಗಳು, ಆಟಿಕೆಗಳಂತೆ ಕಾಣುವ ವಾಹನಗಳು, ಒಂದು ಬದಿಯಲ್ಲಿ ದಿಗಂತದವರೆಗೆ ವ್ಯಾಪಿಸಿದ ವಿಶಾಲ ಕಡಲು, ತೇಲುತ್ತಿರುವ ಹಾಯಿದೋಣಿಗಳು, ದೂರದಲ್ಲಿ ಲಂಗರು ಹಾಕಿರುವ ಹಡಗುಗಳು, ಮತ್ತೊಂದು ಕಡೆ ಒಂದಕ್ಕೊಂದು ಹೆಗಲು ಕೊಟ್ಟು ನಿಂತಿರುವ ರಟ್ಟಿಗೆ ಪೆಟ್ಟಿಗೆಗಳಂತೆ ತೋರುವ ಮುಗಿಲೆತ್ತರದ ಕಟ್ಟಡಗಳು, ಹಸಿರೇ ಮೈದಳೆದಂತ ಉದ್ಯಾನವನ, ಸರೋವರ, ಕಾರಂಜಿಗಳು, ಮುಗಿಯುವುದೇ ಇಲ್ಲವೇನೋ ಎಂಬಂತೆ ಕಾಣುವ ದೂರಕ್ಕೆ ಹಬ್ಬಿದ ವಿಸ್ಮಯ ನಗರಿಯ ಬಣ್ಣದ ಬೆಳಕುಗಳು ನಮ್ಮನ್ನು ಮೋಹಕಗೊಳಿಸಿ ಮನಸನ್ನು ಸೆಳೆದು ಹಿಡಿದಿಟ್ಟುಬಿಡುತ್ತವೆ.

ಸಿಂಗಾಪುರದಲ್ಲಿನ ವೈಭವೋಪೇತ ೫೫ ಮಹಡಿಗಳ ಈ ಕಟ್ಟಡವೇ ಮರೀನಾ ಬೇ ಸ್ಯಾಂಡ್ಸ್ ಎನ್ನುವ ಹೊಟೆಲ್. ದೂರದಿಂದ ನೋಡಿದರೆ ಕ್ರಿಕೆಟ್ಟಿನ ಮೂರು ವಿಕೆಟ್ ಗಳನ್ನು ಒಂದರ ಪಕ್ಕದಲ್ಲೊಂದು ಹುಗಿದಿಟ್ಟಂತೆ ಕಾಣುವ ಇದು ಹತ್ತಿರ ಹೋಗುತ್ತಿದ್ದಂತೆಯೇ ಜಗಮಗಿಸುವ ಗಾಜಿನ ಸುಂದರ ಕಟ್ಟಡವಾಗಿ ಗೋಚರಿಸುತ್ತದೆ. ಇದರ ಟೆರೇಸಿನಲ್ಲಿರುವುದು ಮರೀನಾ ಬೇ ಸ್ಯಾಂಡ್ಸ್ ಸ್ಕೈ ಪಾರ್ಕ್. ನೂರಾರು ಜನರು ನಿಂತು ವೀಕ್ಷಿಸಲು ಸಾಕಾಗುವಷ್ಟು ವಿಶಾಲವಾಗಿದೆ. ನೆಲಮಹಡಿಯಿಂದ ಕೆಲವೇ ಸೆಕೆಂಡುಗಳಲ್ಲಿ ಲಿಫ್ಟ್ ಮೂಲಕ ಈ ಸ್ಕೈಪಾರ್ಕ್ ತಲುಪಿದರೆ ತೇಲಿಸಿ ಕರೆದೊಯ್ಯುವಂತಹ ಗಾಳಿಯೊಂದಿಗೆ ಆಗಸದಲ್ಲಿ ಇದ್ದ ಅನುಭವ. ನಾವು ಅಲ್ಲಿ ತಲುಪಿದಾಗ ಸಂಜೆಯಾಗಿತ್ತು. ಇನ್ನೂ ಸೂರ್ಯ ಪೂರ್ತಿ ಮುಳುಗಿರಲಿಲ್ಲ. ಈ ತೆರೆದ ಟೆರೇಸ್ ಅಷ್ಟು ಎತ್ತರದಲ್ಲಿದ್ದರೂ ಭಯವಾಗದಂತೆ ಸುರಕ್ಷಿತವಾಗಿತ್ತು.

ಬಾನೆತ್ತರದ ಟೆರೇಸ್ ಪಾರ್ಕಿನಲ್ಲಿ ನಾವು ತಿರುಗಾಡುತ್ತಾ ಸ್ವಲ್ಪ ಸಮಯ ಕಳೆಯುತ್ತಿದ್ದಂತೇ ದೂರದಲ್ಲಿ ವಿಮಾನಗಳ ಸದ್ದು ಕೇಳಿಸಿತು. ಯುದ್ಧವಿಮಾನಗಳಂತಹ ವಿಮಾನಗಳು ಶರವೇಗದಲ್ಲಿ ನಾವಿದ್ದ ಟೇರೇಸಿನ ಮೇಲೆ ಹತ್ತಿರದಲ್ಲೇ ಹಾದುಹೋದವು. ಅದರ ಹಿಂದೆ ಮತ್ತೊಂದಿಷ್ಟು ವಿಮಾನಗಳು ಸಾಲಾಗಿ, ವಿವಿಧ ಆಕಾರಗಳಲ್ಲಿ ಒಂದು ಮಿನಿ ಏರ್ ಶೋ ನಡೆಸಿದವು. ಆನಂತರ ಹೆಲಿಕಾಪ್ಟರುಗಳು ಸಿಂಗಾಪುರದ ಬಾವುಟವನ್ನು ಪ್ರದರ್ಶಿಸುತ್ತಾ ನಿಧಾನಕ್ಕೆ ಹಾರಿದವು. ಪ್ರವಾಸೋದ್ಯಮವೇ ಮುಖ್ಯವಾಗಿರುವ ಸಿಂಗಾಪುರದಲ್ಲಿ ಪ್ರವಾಸಿಗರಿಗೋಸ್ಕರ ಇಂತಹ ಪ್ರದರ್ಶನಗಳಿರುತ್ತವೆಯಂತೆ. ನಿಧಾನಕ್ಕೆ ಕತ್ತಲಾಗುತ್ತಿದ್ದಂತೆ ಸುತ್ತಲಿನ ಕಟ್ಟಡಗಳ ದೀಪಗಳೆಲ್ಲಾ ಹತ್ತಿಕೊಳ್ಳುತ್ತಿದ್ದವು. ನೋಡನೋಡುತ್ತಲೇ ಅರ್ಧಗಂಟೆಯಲ್ಲಿ ಸುತ್ತಲಿನ ಜಗತ್ತು ಬಿಳಿ, ಕೆಂಪು, ನೀಲಿ, ಹಸಿರು ಬಣ್ಣದ ಕೋರೈಸುವ ದೀಪಗಳಿಂದ ತುಂಬಿತು. ದೂರದ ಯಾವುದೋ ಕಟ್ಟಡದಿಂದ ಸುತ್ತಲೂ ತಿರುಗುತ್ತಿರುವ ಲೇಸರ್ ಕಿರಣಗಳು, ಅಲ್ಲೇ ಅನತಿ ದೂರದಲ್ಲಿ ಸುತ್ತುತ್ತಿರುವ ದೈತ್ಯಾಕಾರದ ಜೈಂಟ್ ವ್ಹೀಲ್, ಸರೋವರಲ್ಲೆಲ್ಲಾ ಚಿಮ್ಮುತ್ತಿರುವ ಬಣ್ಣದ ಕಾರಂಜಿಗಳು, ಜಾಹೀರಾತು ಫಲಕಗಳು ಮುಂತಾದ ಬೆಳಕುಗಳಿಂದ ಇಡೀ ನಗರಿ ದೀಪಗಳ ಜಗತ್ತಾಗಿ ಪರಿವರ್ತನೆಗೊಂಡಿತ್ತು.

ಈ ಹೋಟೆಲ್ ಕಟ್ಟಡ ಇರುವ ಗಾರ್ಡನ್ಸ್ ಬೈ ದ ಬೇ ಎನ್ನುವ ಪ್ರದೇಶವೇ ಒಂದು ಸುಂದರ ಉದ್ಯಾನವನ. ನೂರಾರು ಎಕರೆ ಪ್ರದೇಶದ ಈ ಉದ್ಯಾನವನ ಸಮುದ್ರವನ್ನು ಹಿಂದಕ್ಕೆ ತಳ್ಳಿ ನಿರ್ಮಿಸಿದ್ದಂತೆ. ಸಮುದ್ರವನ್ನು ಸ್ವಲ್ಪ ಭಾಗ ಒಳತಂದಿರುವ ಕೊಲ್ಲಿಯ ಪಕ್ಕದಲ್ಲೇ ಹರಡಿಕೊಂಡಿದೆ. ಪೂರ್ತಿ ಕತ್ತಲಾವರಿಸುತ್ತಿದ್ದಂತೆ ಇತ್ತಕಡೆ ಉದ್ಯಾನವನವೂ ಕೂಡ ಹೊಳೆಯುತ್ತಿತ್ತು. ಅದು ಕಣ್ಣಿಗೆ ಹಬ್ಬ. ಈ ಮಾನವ ನಿರ್ಮಿತ ಸೌಂದರ್ಯ ಲೋಕ ಪ್ರಕೃತಿ ಮತ್ತು ಆಧುನಿಕ ತಂತ್ರಜ್ನಾನಗಳ ಸಮ್ಮಿಳನ. ಪ್ರಕೃತಿ ಸೌಂದರ್ಯ ಒಂದು ಬಗೆಯದ್ದಾದರೆ ಈ ಮಾನವ ನಿರ್ಮಿತ ಸೌಂದರ್ಯ ಮತ್ತೊಂದು ಬಗೆ. ಕ್ಲೌಡ್ ಫಾರೆಸ್ಟ್ ಮತ್ತು ಫ್ಲವರ್ ಡೂಮ್ ಎಂದು ಕರೆಯಲ್ಪಡುವ ಎರಡು ದೊಡ್ಡ ಗಾಜಿನ ಗುಮ್ಮಟದಂತಹ ರಚನೆಗಳಲ್ಲಿ ಜಗತ್ತಿನ ವಿವಿಧ ಪ್ರದೇಶಗಳ ಸಸ್ಯರಾಶಿಗಳನ್ನು ಬೆಳೆಸಿಡಲಾಗಿದೆ. ಕೃತಕ ಜಲಪಾತದ ಜೊತೆ ಮಳೆಕಾಡುಗಳ ವಾತಾವರಣ ಸೃಷ್ಟಿಸಿಡಲಾಗಿದೆ. ಉದ್ಯಾನವನದಲ್ಲಿ ಸೂಪರ್ ಟ್ರೀಗಳೆಂದು ಕರೆಯಲ್ಪಡುವ ದೈತ್ಯಾಕಾರದ ಮರಗಳಂತಹ ಎತ್ತರ ರಚನೆಗಳು ವಿವಿಧ ಬಣ್ಣಗಳಿಂದ ಹೊಳೆಯುವುದನ್ನು ಮೇಲಿನಿಂದ ಆಸ್ವಾದಿಸಿದೆವು. ವಾತಾವರಣವೂ ಹಿತಕರವಾಗಿತ್ತು. ರಾತ್ರಿಯಾಗುವವರೆಗೂ ಅಲ್ಲೇ ಇದ್ದು ಒಲ್ಲದಮನಸ್ಸಿಂದ ಕೆಳಗೆ ಇಳಿದುಬಂದೆವು. ನಂತರ ಮುಂಭಾಗದ ಸರೋವರದ ನೀರಿನ ಮೇಲೆ ನಡೆಯುವ ಸೌಂಡ್ ಎಂಡ್ ಲೈಟ್ ಶೋ ನೋಡಿ ಊಟ ಮುಗಿಸಿ ತಿರುಗಾಡಿ ಮನೆಗೆ ಹೊರಟಾಗ ತಡರಾತ್ರಿಯಾಗಿದ್ದರೂ ಸಹ ಸಿಂಗಾಪುರದ ರಸ್ತೆಗಳಲ್ಲಿ ಜನರೇನೂ ಕಡಿಮೆಯಾಗಿರಲಿಲ್ಲ.

ಇಡೀ ಸಿಂಗಾಪುರವೇ ಪ್ರವಾಸೋದ್ಯಮದ ದೇಶ. ಭೇಟಿನೀಡುವಂತಹ ಹಲವಾರು ಆಕರ್ಷಣೆಗಳು, ಸ್ಥಳಗಳು ಇವೆ. ಝೂ, ರಿವರ್ ಸಫಾರಿ, ನೈಟ್ ಸಫಾರಿ, ಬರ್ಡ್ ಪಾರ್ಕ್, ಮ್ಯೂಸಿಯಂಗಳು, ಚೀನೀ ಟೆಂಪಲ್ ಗಳು, ಸೆಂಟೋಸಾ ದ್ವೀಪದ ಯುನಿವರ್ಸಲ್ ಸ್ಟೂಡಿಯೋ, ಅಂಡರ್ ವಾಟರ್ ವರ್ಲ್ಡ್, ಕೆಸಿನೋ ಹೀಗೆ ನೂರಾರು ಜಾಗಗಳಿವೆ. ಸಿಂಗಾಪುರದ ವಾಣಿಜ್ಯ ಪ್ರದೇಶಗಳು ದಿನದ ೨೪ಗಂಟೆ ತೆರೆದಿರುತ್ತದೆ. ಶಾಪಿಂಗ್ ಸೆಂಟರುಗಳು, ಮಾಲ್ ಗಳು ಸುತ್ತಾಡಿದಷ್ಟೂ ಮುಗಿಯುವುದಿಲ್ಲ. ಓಡಾಟಕ್ಕೆ ಮೆಟ್ರೋ ರೈಲು, ಸಿಟಿ ಬಸ್ಸುಗಳು, ಟ್ಯಾಕ್ಸಿಗಳು ಇವೆ. ಲಿಟಲ್ ಇಂಡಿಯಾ ಎಂಬ ಪ್ರದೇಶದಲ್ಲಿ ಭಾರತೀಯ ಆಹಾರದ ಹೋಟೆಲುಗಳು, ಅಂಗಡಿಗಳು ತುಂಬಿವೆ. ಲಕ್ಷಾಂತರ ಪ್ರವಾಸಿಗರು ಭೇಟಿಕೊಡುವ ಈ ದೇಶದಲ್ಲಿ ಪ್ರತಿಯೊಂದು ತಾಣಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿಟ್ಟಿರುವುದು ಸಂತೋಷವುಂಟುಮಾಡುತ್ತದೆ.

ಹೋಗುವುದು ಹೇಗೆ?
ಬೆಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನಗಳಿವೆ. ಮೂರ್ನಾಲ್ಕು ತಾಸಿನ ಪ್ರಯಾಣವಷ್ಟೆ.


‘ಪತ್ರಿಕೆಗೆ ಬರೆಯೋದು ಹೇಗೆ?’ - ಪುಸ್ತಕ ಪರಿಚಯ


ಬರೆವಣಿಗೆ ಒಂದು ಕಲೆ. ಹಲವರಿಗೆ ಆ‌ ಕಲೆ ಇರುತ್ತದೆ. ಇಲ್ಲೇ ಫೇಸ್ಬುಕ್ಕಲ್ಲೇ ನೋಡಿರಬಹುದು, ಎಷ್ಟೊಂದು ಜನ ಚೆನ್ನಾಗಿ ಬರೆಯುವವರಿರುತ್ತಾರೆ. ಆದರೆ ಅವರಲ್ಲಿ ಹಲವರು ತಮ್ಮ ಪ್ರತಿಭೆಯನ್ನು ಫೇಸ್ಬುಕ್ಕಿಗೇ ಸೀಮಿತಮಾಡಿಕೊಂಡುಬಿಟ್ಟಿರುತ್ತಾರೆ. ಬರೆದು ನಾವೇ ಇಟ್ಟುಕೊಳ್ಳುವುದಕ್ಕಿಂತ ಪತ್ರಿಕೆ/ಮ್ಯಾಗಜೀನುಗಳಲ್ಲಿ‌ ಪ್ರಕಟಿಸಿದರೆ ಅದು ಸಾವಿರಾರು ಜನರನ್ನು ತಲುಪುತ್ತದೆ. ಆದರೆ ಪ್ರಕಟಣೆಗೆ ಸ್ವೀಕಾರವಾಗಲು ವಿಷಯದ ಆಯ್ಕೆಯಿಂದ ಹಿಡಿದು‌‌ ಪದಮಿತಿಯಲ್ಲಿ ಅದರ‌‌ ಪ್ರಸ್ತುತಪಡಿಸುವಿಕೆ ಬಹಳ ಮುಖ್ಯ. ಎಷ್ಟೋ ಬರಹಗಾರರು‌ ಈ ಹಂತದಲ್ಲಿ ಎಡವಬಹುದು. ಆಸಕ್ತ ಹೊಸಬರು ಒಂದು ಲೇಖನ ಹೇಗೆ ಬರೆಯುವುದು ಎಂಬ ಗೊಂದಲಕ್ಕೆ ಬೀಳಬಹುದು. ನಿಮ್ಮಲ್ಲೂ ಅನೇಕರು ಇದನ್ನು ಅನುಭವಿಸಿರಬಹುದು. ನೀವು ಬರೆದು‌ ಕಳಿಸಿದ್ದು ಪ್ರಕಟಣೆಗೆ ಸ್ವೀಕಾರವಾಗದೇ ಇದ್ದಿರಬಹುದು.‌ ಪತ್ರಿಕೆಗಳಲ್ಲಿ ಕೆಲಸ ಮಾಡುವವರ ಅನುಭವದ ಪ್ರಕಾರ ಪ್ರಕಟಣೆಗೆ ಬರುವ ಲೇಖನಗಳಲ್ಲಿ ಹಲವಾರು ಇಂತಹ ಕಾರಣಕ್ಕೇ ತಿರಸ್ಕೃತವಾಗುತ್ತವೆ. ಬರೆವಣಿಗೆ ಎಂಬುದು ಯಾರೂ ಕಲಿಸಲಾಗದ ಪ್ರತಿಭೆಯಾದರೂ ಕೂಡ ಅದರ ಕ್ರಮವನ್ನು ತಿಳಿದುಕೊಂಡಿದ್ದರೆ ಒಳ್ಳೆಯದು.


‘ಪತ್ರಿಕೆಗೆ ಬರೆಯೋದು ಹೇಗೆ?’ ಎಂಬ‌ ಈ ಪುಸ್ತಕದಲ್ಲಿ ಇಂತಹ ವಿಷಯಗಳನ್ನು ಬಹಳ ಚೆನ್ನಾಗಿ ತಿಳಿಸಿಕೊಡಲಾಗಿದೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅಂಕಣ, ಲೇಖನಗಳನ್ನು ಬರೆಯುತ್ತಿರುವ ಯುವಬರಹಗಾರರು ಮತ್ತು ನಾಡಿನ ಪತ್ರಿಕೆಗಳ ಪುರವಣಿಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರೇ ಇಲ್ಲಿ ಮಾರ್ಗದರ್ಶೀ ಲೇಖನಗಳನ್ನು ಬರೆದಿರುವುದು ಇದರ ವಿಶೇಷ‌. ಮಿಥಿಲಾ ಪ್ರಕಾಶನದ ಈ ಪುಸ್ತಕವನ್ನು ಒಮ್ಮೆ ಸಾದ್ಯಂತವಾಗಿ ಓದಿ ಆನಂತರ ಬರೆಯಲು ಕುಳಿತರೆ ಆ ವ್ಯತ್ಯಾಸವನ್ನು ಸ್ವತಃ ಅನುಭವಿಸಬಹುದು. ವಿದ್ಯಾರ್ಥಿಗಳಿಗೆ, ಫ್ರೀಲ್ಯಾನ್ಸ್ ಲೇಖಕರಾಗಬಯಸುವವರಿಗೆ ಇದು ಒಳ್ಳೆಯ ಕೈಪಿಡಿ. ಸಂಗ್ರಹಯೋಗ್ಯ ಪುಸ್ತಕ.

ಶನಿವಾರ, ಏಪ್ರಿಲ್ 15, 2017

ಸೊಪ್ಪಿನ ಮನೆಮದ್ದಿಗೆ ಹೆದರಿ ಮೆತ್ತಗಾದ ಅಂಗಾಲಿನ ಆಣೆ !

ಹಿಂದಿನ ವರ್ಷ ನನ್ನ ಅಂಗಾಲಲ್ಲಿ ಒಂದು 'ಆಣಿ' ಆಗಿತ್ತು. 'ಆಣಿ' ಅಂದರೆ ನಿಮಗೆ ಗೊತ್ತಿರಬಹುದು. ಮೊದಮೊದಲು ಒಂದು ಜಾಗದಲ್ಲಿ ಸಣ್ಣ ಮುಳ್ಳು ಚುಚ್ಚಿದಂತೆ ಅನ್ನಿಸುತ್ತದೆ. ಆಮೇಲೆ ಕ್ರಮೇಣ ಅಲ್ಲಿ ಚರ್ಮ ಗಟ್ಟಿಯಾಗುತ್ತಾ ಚರ್ಮದೊಳಗೇ ಸಣ್ಣ ಗಂಟಿನಂತಾಗುತ್ತದೆ. ಕಾಲು ನೆಲಕ್ಕೆ‌ ಊರಲಾಗದಷ್ಟು ನೋವು ಕೊಡುತ್ತದೆ. ಕೆಲವರಿಗೆ ಅದರಲ್ಲಿ‌ ನಡುವೆ ಒಂದು ಕಪ್ಪು ಚುಕ್ಕಿ ಮೂಡುತ್ತದೆ. ಕೆಲವರಿಗೆ ಅದರಿಂದ ಒಂದು ಕಾಳಿನಂತಹ ರಚನೆಯೂ ಹೊರಬರುತ್ತದೆ. ಅದಕ್ಕೆ 'ಮೀನಿನಕಣ್ಣು' ಅನ್ನುತ್ತಾರಂತೆ.
ಈಗ ನನ್ನ ಅಂಗಾಲಿನ ಆಣಿಯ ಕತೆ ಮುಂದುವರೆಸ್ತೇನೆ. ಮೊದಲು ಚುಚ್ಚಿದಂತಹ ನೋವು ಬಂದಾಗ ನಿರ್ಲಕ್ಷಿಸಿದ್ದೆ. ಆಮೇಲೆ ಸಣ್ಣ ಮುಳ್ಳು‌ ಇರಬಹುದು ಎಂದು ಒಮ್ಮೆ ಕೆದಕಿಯೂ ನೋಡಿ ಸಿಗದಿದ್ದಾಗ ಸುಮ್ಮನಾದೆ. ಆದರೆ ದಿನದಿಂದ ದಿನಕ್ಕೆ ಅದು ನಿಧಾನಕ್ಕೆ ಗಟ್ಟಿಯಾಗುತ್ತಾ ಹೋಗಿ ಎರಡ್ಮೂರು ತಿಂಗಳಾಗುವುದರೊಳಗಾಗಿ ಬರಿಗಾಲನ್ನು ನೆಲಕ್ಕೆ ಊರುವುದು ಕಷ್ಟವಾಯಿತು. ಆಮೇಲೆ ಇದಕ್ಕೆ‌ ಪರಿಹಾರ ಚಿಕಿತ್ಸೆ ಹುಡುಕುವ ಕೆಲಸ ಶುರುವಾಯಿತು. ಯಾಕೋ ಅಲೊಪತಿ ಡಾಕ್ಟರಲ್ಲಿ ಹೋಗಲು ಮನಸಾಗದೇ ಮನೆಮದ್ದಿನ ಸಲಹೆ‌ ಕೇಳಿದೆ. ನಮ್ಮ ಕಡೆ ಹಳ್ಳಿಯಲ್ಲಿ ಹಲವು ಸಲಹೆ ದೊರೆತವು.‌
೧. ಈರುಳ್ಳಿ slice ಸ್ವಲ್ಪ ಬಿಸಿಮಾಡಿ‌ ಅಂಗಾಲಿಗೆ ಕಟ್ಟಿಕೊಂಡು ರಾತ್ರಿ ಮಲಗುವುದು.
೨. ಕಡ್ಲೇಬೇಳೆಯನ್ನು ಬಾಯಲ್ಲಿ ಚೆನ್ನಾಗಿ ಅಗೆದು ಅದನ್ನು ಆಣಿಗೆ ಹಚ್ಚಿ‌ ಕಟ್ಟುವುದು.
೩. ಬೆಣಕು ಕಲ್ಲನ್ನು ಬಿಸಿಮಾಡಿ ಅದರ ಮೇಲೆ ತೆಂಗಿನ ಚಿಪ್ಪು ಮುಚ್ಚಿ ಅದರ ಮೇಲೆ ಅಂಗಾಲಿಟ್ಟು ಆಣಿಯನ್ನು ಮೆದುಮಾಡುವುದು.
೪. ಮೈಲುತುತ್ತವನ್ನು ಅನ್ನಬೇಯಿಸಿದ ನೀರಲ್ಲಿ‌ ತೇಯ್ದು ಹಚ್ಚುವುದು.
೫. ಹೊಳೆದಂಡೆಯ ನಯವಾದ ಕಲ್ಲನ್ನು ಅಥವಾ ಇಟ್ಟಿಗೆಯನ್ನು ಬಿಸಿಮಾಡಿ ಅದರ ಮೇಲೆ‌ ಕಾಲಿಡುವುದು.
೬. ಅಡಕೆಯಂತೆ ಇರುವ ಒಂದು ಆಯುರ್ವೇದ ಔಷದಿ ತೇಯ್ದು ಹಚ್ಚುವುದು.
ಇದರಲ್ಲಿ ೧,೨,೪,೬ - ಈ ನಾಲ್ಕು ಚಿಕಿತ್ಸೆಗಳನ್ನ ಹಲವು ದಿನಗಳವರೆಗೆ ಮಾಡಿದೆ. ಆದರೆ ಯಾವುದರಿಂದಲೂ ಗುಣವಾಗದೇ ಅಂಗಾಲೂರಿ ನಡೆಯಲಾರದ ಸ್ಥಿತಿಗೆ ಬಂದೆ.‌ ನಾಲ್ಕು ತಿಂಗಳು ಕಳೆದಿತ್ತು. ಕೊನೆಗೆ ಚರ್ಮದ ವೈದ್ಯರ ಬಳಿಯೇ ಹೋಗಬೇಕಾಯಿತು. ಅವರು corn plaster ಹಚ್ಚಲು ಸಲಹೆ ಕೊಟ್ಟರು. ಅದು band-aidನಂತದ್ದು. ಹಚ್ಚಿ ಮೂರುದಿನಗಳ ನಂತರ ತೆಗೆಯಬೇಕು. ಒಂದು ಆಣಿ‌ ಕೊಳೆಯಲು ಮೂರ್ನಾಲ್ಕು ಇಂತಾದ್ದು ಬೇಕಾಗುತ್ತದೆ ಎಂದರು. ಅವರ ಪ್ರಕಾರ ಅಂಗಾಲಿನ ಚರ್ಮ ಯಾವುದೋ ಕಾರಣಕ್ಕೆ ಸೂಕ್ಷ್ಮವಾಗಿ ತೆರೆದುಕೊಂಡಾಗ ಅದರಲ್ಲಿ ಬ್ಯಾಕ್ಟೀರಿಯಾಗಳು ಹೋಗಿ ಹೀಗಾಗ್ತದಂತೆ.
ಅಷ್ಟರಲ್ಲಿ ನನ್ನ ಆಣಿಯ ಸುದ್ದಿ ಕುಟುಂಬದಲ್ಲಿ ಹರಡಿತ್ತು. ಆಗ ಬಂತು ನಮ್ಮ ಚಿಕ್ಕಮ್ಮರ ನಾಟಿಔಷಧಿ ಸಲಹೆ. ಅದೇ ಈ ಚಿತ್ರದಲ್ಲಿರುವ ಸೊಪ್ಪು. ಇದನ್ನು ಈರುಳ್ಳಿಯೊಂದಿಗೆ ರುಬ್ಬಿ ಅಂಗಾಲಿಗೆ ಹಚ್ಚಿ ಕಟ್ಟಿ ರಾತ್ರಿಯಿಡೀ ಬಿಡಬೇಕು. ಹೀಗೆ ಕೆಲದಿನ ಮಾಡಿದರೆ ಗುಣವಾಗುವ ೯೯% ಭರವಸೆಯೂ ಸಿಕ್ಕಿತು. ಆದರೆ‌ ಆ ಸೊಪ್ಪಿಗೆ ಹೆಸರಿಲ್ಲ (ಹೆಸರು ಗೊತ್ತಿಲ್ಲ). ಅದನ್ನ ನೋಡಿ ಹುಡುಕಿಯೇ ಕಂಡುಹಿಡಿಯಬೇಕು. ಹಾಗಂತ ದುರ್ಲಭವೇನಲ್ಲ. ಅವರು ಹುಬ್ಬಳ್ಳಿಯಲ್ಲಿರುವುದರಿಂದ ಅವರ ಮನೆಯ ಬಳಿ ಪಾರ್ಕಿನಲ್ಲೇ ಇತ್ತಂತೆ.‌ ಕಿತ್ತು ಕಳಿಸಿಕೊಟ್ಟರು.
ಅನಂತರದ್ದೆಲ್ಲಾ ಮ್ಯಾಜಿಕ್. ಈ ಸೊಪ್ಪಿನೊಂದಿಗೆ ಈರುಳ್ಳಿ ರುಬ್ಬಿ ಆಣಿಗೆ ಹಚ್ಚಿ ಅದರಮೇಲೆ ಸಣ್ಣ ಬಾಳೆಎಲೆ ಇಟ್ಟು ಕಟ್ಟಿ ರಾತ್ರಿಯಿಡೀ ಬಿಟ್ಟೆ. ಶುರುಮಾಡಿದ ಎರಡನೇ ದಿನಕ್ಕೇ ಆಣಿಯ ನೋವು ಮಾಯ! ದಿನಬಿಟ್ಟು ದಿನ ಹಚ್ಚುತ್ತಿದ್ದೆ. ಒಂದು ವಾರದೊಳಗಾಗಿ ಆಣಿ ಮೆತ್ತಗಾಗಿಹೋಯಿತು. ಮತ್ತೊಂದು ವಾರದಲ್ಲಿ ಹೇಳಹೆಸರಿಲ್ಲದೇ ಮಾಯವಾಯಿತು!


***
ಈ ಅನುಭವವನ್ನು ಫೇಸ್ಬುಕ್ಕಿನ 'ಕಾಜಾಣ' ಗುಂಪಿನಲ್ಲಿ ಹಂಚಿಕೊಂಡಾಗ ಅದಕ್ಕೆ ಬಂದ ಉಪಯುಕ್ತ ಪ್ರತಿಕ್ರಿಯೆಗಳನ್ನು ಈ ಕೆಳಗೆ ಸಂಗ್ರಹಿಸಿದ್ದೇನೆ.
ನಮ್ಮ ಕಡೆ ಇದನ್ನ ಅಡಿಕೆ ಸೊಪ್ಪು ಅಂತಾನೆ ಕರೆಯುತ್ತಾರೆ. ಗಾಯಗಳಾದಾಗ ರುಬ್ಬಿ ಅಥವಾ ಕೈನಲ್ಲಿ ಮಸೆದು ಅದರ ರಸವನ್ನು ಹಿಂಡುತ್ತಿದ್ದರು.:) - Vanaja Mahesh 

ನಾನು ಇದನ್ನು ಮೊದಲು ನೋಡಿದ್ದು ಶಿವಗಂಗೆಯಲ್ಲಿ . ಚೇಳಿನ ಸೊಪ್ಪು ಅಂತ ಕರೆಯುತ್ತಿದ್ದರು. ವಿಷದ ಚೇಳು ಕಚ್ಚಿದಾಗ ಇದನ್ನು ಬೆಲ್ಲದ ಜೊತೆ ತಿನ್ನಿಸಿದರೆ ವಿಷದ ಪರಿಣಾಮ ಕಡಿಮೆ ಆಗುತ್ತದೆ. ಚೇಳು ಕಡಿದ ಜಾಗಕ್ಕೂ ಅದರ ರಸ ಸವರುತ್ತಾರೆ. ಬೆಂಗಳೂರಲ್ಲೂ ಕಳೆಯಂತೆ ಪಾರ್ಕ್ಗಳಲ್ಲಿ, ಚರಂಡಿ ಬದಿಯಲ್ಲಿ ಬೆಳೆದಿದ್ದು ನೋಡಿದ್ದೇನೆ. - Rajesh Srivatsa

ಗೊಂಡೇ(ಹಾರ) ಸೊಪ್ಪು.....
ಎಲ್ಲಾ ತರಹದ ಗಾಯಕ್ಕೆ ಪ್ರಥಮ ಔಷದ - S D Sathyananda Udupa

ನೀವು ಕೊಟ್ಟಿರುವ ಚಿತ್ರದಲ್ಲಿರುವ ಸೊಪ್ಪನ್ನು ನಮ್ಮ ಊರಿನಲ್ಲಿ (ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ) ಗೆಜ್ಜಡಿಕೆ ತಪ್ಲು ಅನ್ನುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು - Tridax procumbens. ಇದರ ಹೂವನ್ನು ದಂಟಿನ ಸಮೇತ ಹಿಡಿದುಕೊಂಡು ನಮ್ಮ ಕಡೆ ಚಿಕ್ಕ ಮಕ್ಕಳು ಆಟವಾಡುತ್ತಿದ್ದರು. ಅವರು "ತಾತಾ.. ತಾತಾ.. ಒಂದ್ರುಪಾಯಿ ಕೊಡು ಇಲ್ದಿದ್ರೆ ನಿನ್ನ ತಲೆಕಾಯ್ ಎಗ್ರಿಸ್ತೀನಿ" ಎಂದು ಈ ಹೂವಿನ ತಲೆಯನ್ನು ಎಗುರಿಸುತ್ತಿದ್ದರು.- Sridhar Bandri 

ಇತರೇ ಕಾಜಾಣಿಗರು ಅಭಿಪ್ರಾಯ ಪಟ್ಟಂತೆ ಅದರ ಹೆಸರು ಅಡಿಕೆ ಸೊಪ್ಪು, ಚೇಳಿನ ಸೊಪ್ಪು, ಸೇವಂತಿಗೆ ಸೊಪ್ಪು ಅಂತಲೂ ಪ್ರಾದೇಶಿಕವಾಗಿ ಕರೆಯಬಹುದು. ಅದಕ್ಕೇ ಅದರ ಸಸ್ಯಶಾಸ್ತ್ರೀಯ ಹೆಸರನ್ನು ಕೊಟ್ಟದ್ದು. ನೀವು ನಾನು ಕೊಟ್ಟಿರುವ ಚಿತ್ರವನ್ನು ನೋಡಿ ತಾಳೆ ಮಾಡಿಕೊಳ್ಳಿ. ಒಟ್ಟಾರೆಯಾಗಿ ಇದರಿಂದ ಆಣಿಯನ್ನು ನಯ ಮಾಡಬಹುದು ಎನ್ನುವುದು ಸಂತೋಷಕರ ಸಂಗತಿ. ಈ ಸೊಪ್ಪು ಬಹಳಷ್ಟು ಕಡೆ ಕಳೆ ಗಿಡದಂತೆ ಬೆಳೆಯುತ್ತದೆ!-Sridhar Bandri 

ನಮ್ಮ ಮಾವನವರು ಕಾಮಾಲೆಯಾದವರಿಗೆ ಈ ಗಿಡದ ರಸದ ಜೊತೆಗೆ ತುಳಸಿ ರಸವನ್ನು ಸೇರಿಸಿ ಔಷಧಿಯಾಗಿ ಕೊಡುತ್ತಿದ್ದರಂತೆ. ಈ ಗಿಡಕ್ಕೆ ತೊಂಡೆಸೊಪ್ಪು ಎನ್ನುತ್ತಾರೆ ಎಂದು ನನ್ನ ಪತಿ ಈಗಷ್ಟೆ ತಿಳಿಸಿದರು-Padma Venkatesh 

ಹೌದು! ನಾವೂ ಚಿಕ್ಕಂದಿನಲ್ಲಿ ಬಿದ್ದು ರಕ್ತ ಒಸರಿದರೆ ತಕ್ಷಣವೇ ಅಲ್ಲೇ ಅಕ್ಕಪಕ್ಕದಲ್ಲಿ ಧಂಡಿಯಾಗಿ ಬಿಟ್ಟಿರುತ್ತಿದ್ದ ಈ ಸೊಪ್ಪಿನರಸವನ್ನು ಕೈಯಲ್ಲೇ ಉಜ್ಜಿ ನೇರ ಗಾಯಕ್ಕೇ ಹಾಕುತ್ತಿದ್ದೆವು. ಇದರ ಹೂವಿನ ಹಾರ ಮಾಡುವುದಂತೂ ಅತಿ ಪ್ರಿಯವಾದ ಕಾರ್ಯಗಳಲ್ಲೊಂದಾಗಿತ್ತು! ಅಲ್ಲದೆ ಅದರ ಹೂವನ್ನು ಚಟ್ಟೆಂದು ಎಗರಿಸುವುದೂ ಸಹ ಆಟವಾಗಿತ್ತು. :) ಬಾಲ್ಯದ ನೆನಪುಗಳು..-ಮಾಲಾ ಹೊ ನಾ 

ಈ ಸೊಪ್ಪು ನಮ್ಮ ಹೊಲದ ತುಂಬೆಲ್ಲಾ ಇದೆ. ಕಳೆದ ವರ್ಷ ನನ್ನ ಮಗನಿಗೂ ಆಣಿ ಆಗಿತ್ತು, ಅಮ್ಮ ಸೊಪ್ಪಿನ ಜೊತೆ ಈರುಳ್ಳಿ ಮಿಶ್ರಣದ ಔಷಧಿ ಮಾಡಿದ್ರು ...ಎರಡೇ ದಿನದಲ್ಲಿ ಮಾಯವಾಗಿತ್ತು.-ಸುಗುಣಾ ಮಹೇಶ್ 

 ಬಾಲ್ಯ ಕಾಲದಲ್ಲಿ ಕಾಲಿನಲ್ಲಿ ಆಣಿ ಆದ್ರೆ ಸೂಜಿ-ನೂಲಿಂದ ಆ ಆಣಿಯ ಸುತ್ತ ಒಂದು ಹೊಲಿಗೆ ಹಾಕ್ತಾ ಇದ್ವಿ... ಆಣಿ ಮಾಯ ಆಗ್ತಿತ್ತು...ಈ ಗಿಡ ಸಿಗಬಹುದಾ ಅಂಥ ಮನೆ ಪಕ್ಕದ ಖಾಲಿ ಸೈಟಲ್ಲಿ ಹುಡುಕ್ತಾ ಇದ್ದೀನಿ... ಮನೆ ಹತ್ರ ಒಬ್ಬರು ತುಂಬಾ ವರ್ಷದಿಂದ ಆಣಿ ಆಗಿ ಒದ್ದಾಡ್ತಾ ಇದ್ದಾರೆ. ಸಿಕ್ಕರೆ ಅವರಿಗೆ ತಕ್ಕೊಂಡು ಹೋಗಿ ಕೊಡಬಹುದಲ್ಲ ಅಂಥ ...ಸುರೇಖಾ ಭೀಮಗುಳಿ

 ಇದು ಗೊಂಡೇಸೊಪ್ಪು...ರಾಮಬಾಣದಂತಹ ಮದ್ದು...
ಬಾಲ್ಯದಲ್ಲಿ ರಕ್ತಸುರಿವ, ತರಚಿದ ನಮ್ಮ ಮಂಡಿ ತುಂಬ ಮೆತ್ತಿ ಮೆತ್ತಿ ಒತ್ತಿದ ಅದ್ಭುತ ಸೊಪ್ಪಿದು.
ನಮ್ಮ ನಂ. ಒನ್ ಡಾಕ್ಟರ್ ಇವರೇ :) ಆಗ..

ಆಣಿಗೂ ಇದು ಮದ್ದು ಅಂತ ಗೊತ್ತಾಗಿದ್ದು ಇವತ್ತೇ..
ಧನ್ಯವಾದಗಳು...ಮಾಹಿತಿಗೆ.-Kapila Sridhar

ಅಯ್ಯೋ ಟಿಕ್ಕಿ ತೊಪ್ಪಲ.. ನಮ್ಮ ಕಡೆ ಎಲ್ಲಾ ಗಾಯಗಳಿಗೆ ಏಕಮಾತ್ರ ಔಷಧ.. ಕಳ್ಳನ ರುಂಡ ಹಾರಿಸುತ್ತಿದ್ದೆವು.. ಈ ಹೂವನ್ನು ಕೈಲಿ ಹಿಡಿದು-Deepa Joshi 

ರೊಕ್ಕಾ ಕೊಡ್ತೀಯೋ ಇಲ್ಲಾ ರುಂಡಾ ಹಾರಿಸ್ಲೋ' ಅನ್ನೋ ಆಟಾ ಆಡ್ತಿದ್ದ ನೆನಪು ಬಂತು ಈ ಔಷಧೀಯ ಗುಣವುಳ್ಳ ಟಿಕ್ಕಿ ಸೊಪ್ಪನ್ನ ನೋಡಿ. ..ಚಿಕ್ಕವಳಿದ್ದಾಗ ಹಳ್ಳಿಯ ಮಕ್ಕಳೊಡನೆ ಆಡೋವಾಗ ಈ ಸೊಪ್ಪಿನ ಪರಿಚಯವಾಗಿತ್ತು. ಅವ್ರು ಇದನ್ನ ಚೆನ್ನಾಗಿ ಜಜ್ಜಿ ಗಾಯದ ಮೇಲೆ ರಸ ಹಿಂಡ್ತಾ ಇದ್ರು.. ಆಬ್ಬಾ..ಅದೇನು ಉರಿ ಅಂತೀರಾ. ಇದಕ್ಕೆ ಆನೆಯನ್ನೂ ಗುಣಪಡಿಸೋ ಗುಣವಿದೆ ಅಂತ ತಿಳಿಸಿದ್ದಕ್ಕೆ ನಿಮಗೂ ಮತ್ತು ನಿಮ್ಮ ಚಿಕ್ಕಮ್ಮನಿಗೂ ಧನ್ಯವಾದಗಳು.-Savita Inamdar 

ಶುಕ್ರವಾರ, ಫೆಬ್ರವರಿ 24, 2017

'ನೀವೂ ಪತ್ರಕರ್ತರಾಗಬೇಕೆ?' - ಪುಸ್ತಕ ಪರಿಚಯ

ಮಾಜದ ಹಲವಾರು ವೃತ್ತಿಗಳ ನಡುವೆ ಇವತ್ತಿಗೂ ತನ್ನದೇ ವಿಶಿಷ್ಟ ಸ್ಥಾನ ಹೊಂದಿರುವುದು 'ಪತ್ರಕರ್ತ' ವೃತ್ತಿ. ಹಿಂದಿನ ತಿಂಗಳು ಬಿಡುಗಡೆಯಾದ 'ನೀವೂ ಪತ್ರಕರ್ತರಾಗಬೇಕೆ?' ಪುಸ್ತಕವನ್ನು ಓದಿದೆ. ಪತ್ರಿಕೋದ್ಯಮದ ಕಾರ್ಯವಿಧಾನಗಳು, ವಿಭಾಗಗಳು, ಪತ್ರಿಕಾವೃತ್ತಿಯ ಇತಿಮಿತಿಗಳು, ವರದಿಗಾರಿಕೆ, ಪತ್ರಿಕಾ ಬರೆವಣಿಗೆ ಮುಂತಾದವುಗಳ ಬಗ್ಗೆ ಈ ಪುಸ್ತಕ ಬಹಳ ಚೆನ್ನಾಗಿ ವಿವರಿಸಿದೆ. ವಿವಿಧ ವಿಭಾಗಗಳಲ್ಲಿ ಪರಿಣಿತರಾಗಿರುವ ವೃತ್ತಿನಿರತ ಪತ್ರಕರ್ತರೇ ಬರೆದಿರುವ ಲೇಖನಗಳಾಗಿರುವದರಿಂದ ಇವು ಕೇವಲ ಥಿಯರಿಗಳಲ್ಲ. ಪತ್ರಕರ್ತರಾಗಬಯಸುವವರಿಗೆ, ವಿದ್ಯಾರ್ಥಿಗಳಿಗೆ ಇದೊಂದು ಬಹಳ ಒಳ್ಳೆಯ ಗೈಡ್. ಓದುಗರಿಗೆ, ಆಸಕ್ತರಿಗೆ ಪತ್ರಿಕೋದ್ಯಮದ ಕಾರ್ಯವೈಖರಿ ತಿಳಿದುಕೊಳ್ಳಲು ಉತ್ತಮ ಮಾಹಿತಿ ಪುಸ್ತಕ.

ಪತ್ರಕರ್ತ, ಲೇಖಕ Vinayaka Kodsara ಸಂಪಾದಿತ ಈ ಕೃತಿ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತಿದೆ. ಪತ್ರಿಕಾ ಲೋಕಕ್ಕೆ ಸಂಬಂಧಿಸಿದ ಕನ್ನಡದ ಉತ್ತಮ‌ ಪುಸ್ತಕಗಳ ಸಾಲಿಗೆ ಇದೊಂದು ಸೇರ್ಪಡೆ.* ಈ ಪುಸ್ತಕದ ಬಗ್ಗೆ ಅಕ್ಷರ  ವಿಹಾರ ಬ್ಲಾಗಿನಲ್ಲಿ : ಒಂದು ಕನಸು ಮತ್ತು ಎರಡು ಪುಸ್ತಕ!
* ನವಕರ್ನಾಟಕ  ತಾಣದಲ್ಲಿ ಆನ್ ಲೈನ್  ಖರೀದಿಗೆ : ನೀವೂ ಪತ್ರಕರ್ತರಾಗಬೇಕೆ?

ಬುಧವಾರ, ಜನವರಿ 18, 2017

ರೋಮ್ ರೋಮಾಂಚನ.... Reloaded

೨೦ನವೆಂಬರ್೨೦೧೬ರ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟವಾದ ಬರಹ

ವಿಶಾಲವಾಗಿ ಬೆಳೆದು ನಿಂತ ಆಧುನಿಕ ನಗರಿ, ನಡುನಡುವೆಯೇ ಎದ್ದುಕಾಣುವ ಇತಿಹಾಸದ ಕುರುಹುಗಳು, ವಿಶಿಷ್ಟ ಶೈಲಿಯ ಕಟ್ಟಡಗಳು, ನಕಾಶೆ ಹಿಡಿದು ತಿರುಗುವ ಪ್ರವಾಸಿಗರ ದಂಡು. ಅದುವೇ ರೋಮ್. ಇತಿಹಾಸ ಪ್ರಸಿದ್ಧ ರೋಮ್ ಸಾಮ್ರಾಜ್ಯದ ಮತ್ತು ಕ್ಯಾಥೋಲಿಕ್ ಧಾರ್ಮಿಕತೆಯ ಕೇಂದ್ರಸ್ಥಾನ. ಇಟಲಿಯ ರಾಜಧಾನಿ ರೋಮ್ ನ ಸ್ಥಳೀಯ ಹೆಸರು ರೋಮಾ. ರೋಮ್ ನಗರ ತನ್ನಲ್ಲಿ ಪ್ರಾಚೀನತೆಯನ್ನು ತುಂಬಿಕೊಂಡೇ ಆಧುನಿಕವಾಗಿ ಬೆಳೆದುನಿಂತಿದೆ. ನಗರದಲ್ಲೆಲ್ಲಾ ಪ್ರಾಚೀನ ದೇವಾಲಯಗಳು, ದ್ವಾರಗಳು, ಕಟ್ಟಡಗಳು ಕಾಣಸಿಗುತ್ತವೆ. ಪ್ರೇಕ್ಷಣೀಯ ಸ್ಥಳಗಳು ಹಲವಾರು. ಅವರವರ ಆಸಕ್ತಿಗೆ ತಕ್ಕಂತೆ ಇತಿಹಾಸ, ಧಾರ್ಮಿಕ ಸಂಬಂಧಿತ ಸ್ಥಳಗಳಿವೆ. ಒಂದೊಂದೂ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿವೆ. ರೋಮಾದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ತಲುಪಲು ಮೆಟ್ರೋ ಸಾರಿಗೆ ಇದೆ. ಎಲ್ಲಾ ಮೆಟ್ರೋ ನಿಲ್ದಾಣಗಳೂ ಈ ಸ್ಥಳಗಳ ಹತ್ತಿರವೇ ಇದೆ.

ನಾನು ಅಂತರಜಾಲದಲ್ಲಿ ಜಾಲಾಡಿ ಒಂದಿಷ್ಟು ನನ್ನ ಆಸಕ್ತಿಯ ಸ್ಥಳಗಳನ್ನು ಗುರುತುಹಾಕಿಕೊಂಡಿದ್ದೆ. ಮೊದಲು ಭೇಟಿಕೊಟ್ಟದ್ದು ’ಕೊಲೋಸಿಯಂ’. ಇದೊಂದು ದೊಡ್ಡ ಕ್ರೀಡಾಂಗಣದಂತಹ ರಚನೆ. ಈ ಅಂಗಣದ ರಚನೆ ಅದ್ಭುತವಾಗಿದೆ.  ವರ್ತುಲಾಕಾರದಲ್ಲಿರುವ ಇದು ನಾಲ್ಕು ಹಂತದ ಪ್ರೇಕ್ಷಕ ಗ್ಯಾಲರಿಗಳನ್ನೊಳಗೊಂಡಂತೆ ನಿರ್ಮಿಸಲಾಗಿದೆ.’ಗ್ಲಾಡಿಯೇಟರ್’ ಎಂಬ ಇಂಗ್ಲೀಶ್ ಸಿನೆಮಾ ನೋಡಿದರೆ ಇದರ ಕಲ್ಪನೆ ಸಿಗುತ್ತದೆ. ಆಗಿನ ಕಾಲದಲ್ಲಿ ಗುಲಾಮರ, ಕ್ರೂರ ಪ್ರಾಣಿಗಳ ಹೊಡೆದಾಟದ ಪಂದ್ಯಗಳನ್ನು ಏರ್ಪಡಿಸುತ್ತಿದ್ದ ಜಾಗವಂತೆ. ಈ ಕೊಲೊಸಿಯಂ ಶಿಥಿಲವಾಗಿ ಅನೇಕ ಭಾಗಗಳು ನಾಶವಾಗಿದ್ದರೂ ಸಹ ಆಗಿನ ಕಾಲದ ಈ ಭವ್ಯತೆಯ  ಕಲ್ಪನೆ ಮತ್ತು ನಿರ್ಮಾಣ ಮೆಚ್ಚುವಂತಿದೆ. ಈ ಪ್ರದೇಶದಲ್ಲಿ ಇನ್ನೂ ಅನೇಕ ಸ್ಮಾರಕಗಳು, ದೇವಾಲಯಗಳು, ಭಗ್ನಶಿಲ್ಪಗಳು ಇವೆ.

ಕಾಶಿಗೆ ಹೋಗಿ ವಿಶ್ವೇಶ್ವರನ ದರ್ಶನ ಪಡೆಯದಿದ್ದರೆ ಹೇಗೆ? ನನ್ನ ಮುಂದಿನ ಭೇಟಿ ಕ್ಯಾಥೋಲಿಕ್ಕರ ಪವಿತ್ರಕ್ಷೇತ್ರ ವ್ಯಾಟಿಕನ್. ಇದೊಂದು ಸ್ವತಂತ್ರ ದೇಶವಾಗಿದ್ದರೂ ಸಹ ರೋಮ್ ನಗರದ ಒಳಗೇ ಇದೆ. ಸೇಂಟ್ ಪೀಟರ್ಸ್ ಬೆಸಿಲಿಕಾ ಇಲ್ಲಿನ ದೊಡ್ಡ ಆಕರ್ಷಣೆ. ಹೊರಗಿನಿಂದ ಇದರ ಒಳಗಿನ ಭವ್ಯತೆಯು ಊಹೆಗೆ ಸಿಗುವುದಿಲ್ಲ. ಆದರೆ ಒಳಹೋಗಿ ನೋಡಿದರೆ ಅರಮನೆಯ ವೈಭವವನ್ನು ನೆನಪಿಸುತ್ತದೆ. ಒಳಾಂಗಣದ ಅಲಂಕಾರಿಕ ವಿನ್ಯಾಸಗಳು ಬಲುಸುಂದರವಾಗಿವೆ. ದೊಡ್ಡದೊಡ್ಡ ಪೇಟಿಂಗುಗಳು, ಮೊಸಾಯಿಕ್ ಚಿತ್ರಗಳು, ಶಿಲ್ಪಗಳು ಇತಿಹಾಸ ಮತ್ತು ಧಾರ್ಮಿಕ ಸ್ಥಿತ್ಯಂತರಗಳ ದರ್ಶನ ಮಾಡಿಸುತ್ತವೆ. ಪ್ರಸಿದ್ಧ ಕಲಾವಿದ ಮೈಕಲಾಂಜಲೋ ರಚಿಸಿದ ಮಾತೆಮೇರಿಯ ಮಡಿಲಲ್ಲಿರುವ ಏಸುವಿನ ಶಿಲ್ಪ ಇಲ್ಲಿದೆ. ಇವೆಲ್ಲಾ ನೋಡಿ ಮುಗಿಸಿ ಪಕ್ಕದಲ್ಲಿರುವ ವ್ಯಾಟಿಕನ್ ಮ್ಯೂಸಿಯಂ ಹೊಕ್ಕೆ. ಆಸಕ್ತರಿಗಂತೂ ಈ ಮ್ಯೂಸಿಯಂ ಅದ್ಬುತಗಳ ಆಗರ. ಇದನ್ನು ಸುಮ್ಮನೇ ನೋಡಿಮುಗಿಸಲು ಹಲವಾರು ತಾಸುಗಳೇ ಬೇಕು. ಗ್ರೀಕ್, ರೋಮನ್ ಮುಂತಾದ ಶಿಲ್ಪಗಳು ಇಲ್ಲಿವೆ. ಇಲ್ಲಿನ ಒಂದೊಂದು ವಸ್ತುಗಳೂ ಒಂದೊಂದು ಕತೆ ಹೇಳುತ್ತವೆ. ವ್ಯಾಟಿಕನ್ ನಲ್ಲಿ ಇನ್ನೂ ಕೆಲವು ಪ್ರಾಚೀನ ಧಾರ್ಮಿಕ ಕಟ್ಟಡಗಳು, ಸುಂದರ ಉದ್ಯಾನವನಗಳೂ ಇವೆ.ರೋಮ್ ನಗರದ ಸೌಂದರ್ಯಕ್ಕೆ ಅಲ್ಲಿನ ಸುಂದರ ಕಾರಂಜಿಗಳ ಕಾಣಿಕೆ ದೊಡ್ಡದು. ಅನೇಕ ರಸ್ತೆಗಳು ಸಂಧಿಸುವ ಕಡೆ ಚಿಮ್ಮುವ ಕಾರಂಜಿಗಳು ಮತ್ತು ಅಲ್ಲಿನ ಶಿಲ್ಪಗಳು ನಮ್ಮ ಕಣ್ಣುಗಳನ್ನು ಅಲ್ಲೇ ನೆಡುವಂತೆ ಮಾಡುತ್ತವೆ. ನನ್ನ ಮುಂದಿನ ಭೇಟಿಯ ತಾಣ ಟ್ರೇವಿ ಫೌಂಟೇನ್ ಎನ್ನುವ ಕಾರಂಜಿಯಾಗಿತ್ತು. ಇದೊಂದು ದೊಡ್ಡಕಾರಂಜಿ. ಅರಮನೆಯೊಂದರ ಗೋಡೆಯ ಮೇಲಿರುವ ದೊಡ್ಡ ದೊಡ್ಡ ಹಾಲುಗಲ್ಲಿನ ಸುಂದರ ಶಿಲ್ಪಗಳಿಂದ ಚಿಮ್ಮುವಂತೆ ರೂಪಿಸಲಾಗಿದೆ. ಅದರ ಮುಂದೊಂದು ಅರ್ಧ ವೃತ್ತಾಕಾರದ ತಿಳಿನೀರಿನ ಕೊಳ. ಈ ಕಾರಂಜಿಗೆ ಸಂಬಂಧಿಸಿದಂತೆ ನಂಬಿಕೆಯೊಂದಿದೆಯಂತೆ. ಆ ನಂಬಿಕೆ ಪ್ರಕಾರ ಕಾರಂಜಿಗೆ ಬೆನ್ನುಮಾಡಿ ನಿಂತು ಭುಜದ ಮೇಲಿಂದ ನಾಣ್ಯವೊಂದನ್ನು ಎಸೆದರೆ ಮತ್ತೆ ರೋಮ್ ನಗರಕ್ಕೆ ಕುಟುಂಬ ಸಮೇತ ಬರುವ ಅವಕಾಶ ಸಿಗುತ್ತದಂತೆ! ಹೀಗೆ ನಾಣ್ಯ ಎಸೆಯುತ್ತಿದ್ದ ಅನೇಕ ಜನರನ್ನೂ ಕಂಡೆ! ಈ ಕಾರಂಜಿಯ ಎದುರೇ ಒಂದು ಚರ್ಚ್ ಇದೆ. ಅದರ ಗೇಟ್ ತುಂಬೆಲ್ಲಾ ಬೀಗಗಳು. ಆ ಬೀಗಗಳ ಮೇಲೆಲ್ಲಾ ಏನೋ ಬರೆದಿವೆ. ಇದೂ ಒಂದು ನಂಬಿಕೆಯಂತೆ ಅಲ್ಲಿ. ಪ್ರೇಮಿಗಳು ತಮ್ಮ ಹೆಸರನ್ನು ಬೀಗದ ಮೇಲೆ ಬರೆದು ಈ ಚರ್ಚ್ ಗೇಟಿಗೆ ಹಾಕಿದರೆ ಅವರ ಬಂಧ ಶಾಶ್ವತವಾಗಿರುತ್ತದಂತೆ!

ಸ್ಪಾನಿಷ್ ಸ್ಟೆಪ್ಸ್ ಎನ್ನುವ ೧೩೮ ಮೆಟ್ಟಿಲುಗಳಿರುವ ಜಾಗ, ಅಲ್ಲಿರುವ ದೋಣಿಯಾಕಾರದ ಕಾರಂಜಿ, ಅಂತಹ ಜನಜಂಗುಳಿಯ ನಡುವೆಯೂ ಎತ್ತರದಲ್ಲಿ ಮೌನವಹಿಸಿ ನಿಂತಿರುವ ಚರ್ಚು, ಅಲ್ಲಿಂದ ಕಾಣುವ ನಗರದ ವಿಹಂಗಮ ನೋಟ, ಮುಳುಗುತ್ತಿದ್ದ ಸೂರ್ಯ, ಜೊತೆಗೆ ಇಟಲಿಯ ವಿಶಿಷ್ಟ ಕಪ್ಪು ಕಾಫಿ. ಇವಿಷ್ಟೂ ಸಂಜೆಯನ್ನು ತುಂಬಿದವು. ಕತ್ತಲಾಗುತ್ತಿತ್ತು. ರೋಮಿನ ರಸ್ತೆಗಳಲ್ಲಿ ಅಲೆದು ಅವತ್ತಿನ ತಿರುಗಾಟ ಮುಗಿಸಿ ಹೋಟೆಲ್ ತಲುಪಿದೆ. ನಾಗತಿಹಳ್ಳಿಯವರ ಸಿನೆಮಾದ ’ರೋಮ್ ರೋಮ್ ರೋಮಾಂಚನ..’ ಎಂಬ ಹಾಡು ಅಕ್ಷರಶಃ ನಿಜವೆನಿಸುವಂತೆ ಈ ಐತಿಹಾಸಿಕ ನಗರಿ ಒದಗಿಸಿದ ಅನುಭವ ಅನನ್ಯವಾದುದಾಗಿತ್ತು.

****
ಹೋಗುವುದು ಹೇಗೆ?
ಬೆಂಗಳೂರಿನಿಂದ ವಿಮಾನದಲ್ಲಿ ಪ್ಯಾರಿಸ್ ಅಥವಾ ಫ್ರಾಂಕ್ ಫರ್ಟ್ ಹೋಗಿ ಅಲ್ಲಿಂದ ರೋಮ್ ಗೆ ವಿಮಾನ ಬದಲಿಸಬಹುದು. ಗಲ್ಫ್ ದೇಶಗಳ ಮಾರ್ಗವಾಗಿಯೂ ವಿಮಾನಗಳಿವೆ. ಬೆಂಗಳೂರಿನಿಂದ ರೋಮ್ ಗೆ ನೇರ ವಿಮಾನಗಳೂ ಕೂಡ ಇರಬಹುದು.

ಇತರ ಸ್ಥಳಗಳು.

ರೋಮನ್ ಫೋರಂ, ಸಿಸ್ಟೀನ್ ಚಾಪೆಲ್, ಬೆಸಿಲಿಕಾಗಳು, ಅನೇಕ ಗ್ಯಾಲರಿಗಳು, ಮ್ಯೂಸಿಯಂಗಳು, ಸ್ಮಾರಕಗಳು ಸೇರಿದಂತೆ ರೋಮಿನ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತುಹಾಕಲು ಕನಿಷ್ಟ ಒಂದು ವಾರ ಬೇಕಾಗುತ್ತದೆ.

****


ಶುಕ್ರವಾರ, ಸೆಪ್ಟೆಂಬರ್ 16, 2016

ಕನ್ನಡ ಸಬ್‍ ಟೈಟಲ್ಸ್ ರಚಿಸುವ ಸರಳ ವಿಧಾನ

Kannada subtitles making

ಜಗತ್ತಿನ ಬೇರೆ ಬೇರೆ ದೇಶಗಳ ವಿವಿಧ ಭಾಷೆಗಳಲ್ಲಿ ಉತ್ತಮ ಸಿನೆಮಾಗಳು ತಯಾರಾಗುತ್ತಿರುತ್ತವೆ. ಒಂದು ಭಾಷೆಯ ಸಿನೆಮಾ ಕಲೆಯನ್ನು ವಿವಿಧ ಭಾಷೆಗಳಲ್ಲಿ ಜನರಿಗೆ ತಲುಪಿಸಲು ಇರುವ ಎರಡು ವಿಧಾನಗಳೆಂದರೆ, ಒಂದು ವಾಯ್ಸ್ ಡಬ್ಬಿಂಗ್, ಮತ್ತೊಂದು ಸಬ್ ಟೈಟ್ಲಿಂಗ್. ಇದರಲ್ಲಿ ಡಬ್ಬಿಂಗ್ ಎಲ್ಲರಿಗೂ ಸುಲಭವಾಗಿ ತಲುಪುವಂತದ್ದಾಗಿದ್ದು ಬಹಳ ಸಹಾಯಕಾರಿಯಾಗಿರುತ್ತದೆ.

ಅಡಿಬರಹಗಳನ್ನು ಬಳಸುವುದು ಮತ್ತೊಂದು ಮಾರ್ಗ. ಸಾಮಾನ್ಯವಾಗಿ ನಮಗೆ ವಿವಿಧ ಭಾಷೆಗಳ ಸಿನೆಮಾಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಸುವುದು ಇಂಗ್ಲೀಷ್ ಭಾಷೆಯ ಅಡಿಬರಹಗಳು. ಆದರೆ ಇಂಗ್ಲೀಷಿಗಿಂತ ಹೆಚ್ಚು ಸಾಮಾನ್ಯವಾಗಿ ಅರ್ಥವಾಗುವ ನಮ್ಮ ಕನ್ನಡದಲ್ಲಿದ್ದರೆ ಅದು ಹೆಚ್ಚು ಜನರನ್ನು ತಲುಪಲು ಒಳ್ಳೆಯದು. ಕಿವಿಕೇಳದ ತೊಂದರೆ ಇರುವವರಿಗೂ ಇದು ಸಹಾಯಕಾರಿ. ಹಾಗಾಗಿ ಉತ್ತಮ ಸಿನೆಮಾಗಳಿರಬಹುದು ಅಥವಾ ಶೈಕ್ಷಣಿಕ, ಮಾಹಿತಿ ಇನ್ನಿತರ ವೀಡಿಯೋಗಳಿರಬಹುದು, ಅದನ್ನು ಆಸಕ್ತರಿಗೆ, ಅಗತ್ಯ ಇರುವವರಿಗೆ ತಲುಪಿಸಲು ಕನ್ನಡ ಅಡಿಬರಹಗಳು ಬೇಕು. ಇಂತಹ ಕನ್ನಡ ಅಡಿಬರಹಗಳನ್ನು ತಯಾರಿಸುವುದನ್ನು ಒಂದು ಸಾಮುದಾಯಿಕ ಕೆಲಸವನ್ನಾಗಿ ಮಾಡಬಹುದು.

ಇಲ್ಲಿ ನಾವು ಆಂಗ್ಲ ಅಡಿಬರಹಗಳ ಕಡತಗಳ ಮೂಲಕ ಕನ್ನಡ ಅಡಿಬರಹಗಳನ್ನು ರಚಿಸುವ ಬಗ್ಗೆ ತಿಳಿದುಕೊಳ್ಳೋಣ. ಹೆಚ್ಚು ತಾಂತ್ರಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಬಹಳ ವಿವರವಾಗಿ ಹೋಗದೇ ಸರಳವಾಗಿ ಅರ್ಥಮಾಡಿಕೊಂಡು ಆಮೇಲೆ ಅದರಲ್ಲಿ ಹೆಚ್ಚಿನ ಪ್ರಯತ್ನ, ಪ್ರಯೋಗಗಳನ್ನು ಮಾಡಬಹುದು.

ಅಡಿಬರಹಗಳಲ್ಲಿ image based, text based ವಿಧಗಳಿವೆ. ibx, sub, srt, vtt ಹೀಗೆ ಹಲವಾರು ಮಾದರಿಗಳಿವೆ. ಅವುಗಳಲ್ಲಿ ಹೆಚ್ಚು ಸಾಮಾನ್ಯ, ಸರಳ ಮತ್ತು ಜನಪ್ರಿಯವಾದದ್ದು .SRT ಮಾದರಿ. ಇದಕ್ಕೆ subrip ಫೈಲ್ ಎಂದು ಹೇಳುತ್ತಾರೆ. ಈ ಫೈಲನ್ನು ನೋಟ್ ಪ್ಯಾಡ್ ನಲ್ಲಿ ತೆರೆಯಬಹುದು. (ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ ಓಪನ್ ವಿತ್ ನೋಟ್ ಪ್ಯಾಡ್).

ಈ ಫೈಲಿನ ಒಳರಚನೆ ಈ ಕೆಳಗಿನಂತೆ ಇರುತ್ತದೆ.

1
00:04:00,199 --> 00:04:03,970
Sir, the government defending
goons like them deliberately.

2
00:04:04,033 --> 00:04:06,835
We must teach them a lesson,
sir. - Good.

3
00:04:07,099 --> 00:04:08,768
Did you just finish your training?

ಈ ರಚನೆಯನ್ನು ಹೀಗೆ ಅರ್ಥೈಸಿಕೊಳ್ಳಬಹುದು.

ಮೊದಲ ಸಾಲು: ಕ್ರಮಾಂಕ (೧, ೨, ೩, ೪...........)
ಎರಡನೇ ಸಾಲು: ಸಂಭಾಷಣೆ ಶುರುವಾಗುವ ಮತ್ತು ಕೊನೆಯಾಗುವ ಸಮಯ.
(ಗಂಟೆ:ನಿಮಿಷ:ಸೆಕೆಂಡು,ಮಿಲಿಸೆಕೆಂಡು --> ಗಂಟೆ:ನಿಮಿಷ:ಸೆಕೆಂಡು,ಮಿಲಿಸೆಕೆಂಡು)
ಮೂರನೇ ಸಾಲು: ಸಂಭಾಷಣೆಯ ಪಠ್ಯ ಅಂದರೆ ಮಾತುಗಳು (ಅಥವಾ ಇತರ ಶಬ್ದಗಳು)
ಕೊನೆಯ ಸಾಲು: ಒಂದು ಖಾಲಿ ಜಾಗ (ಸಾಲು)

ಇನ್ನು ಕನ್ನಡ ಅಡಿಬರಹ ರಚಿಸುವುದು ಹೇಗೆಂದು ತಿಳಿಯೋಣ:
1. ಮೊದಲಿಗೆ ಯಾವ ಸಿನೆಮಾಗೆ ಕನ್ನಡ ಅಡಿಬರಹಗಳನ್ನು ರಚಿಸಬೇಕೋ ಅದರ ಇಂಗ್ಲೀಷ್ SRT ಫೈಲನ್ನು ಡೌನ್ಲೋಡ್ ಮಾಡಿಕೊಳ್ಳಿ. ಈ ಜಾಲತಾಣಗಳಲ್ಲಿ ಹುಡುಕಿ ಇಳಿಸಿಕೊಳ್ಳಬಹುದು: Opensubtitles.org, Subscene.com, Moviesubtitles.org, Cinemasubtitles.com
2. ಆ ಫೈಲನ್ನು ನೋಟ್ ಪ್ಯಾಡಿನಲ್ಲಿ ತೆರೆದುಕೊಳ್ಳಿ.
3. ಮೊದಲು ಎರಡು-ಮೂರು ಇಂಗ್ಲೀಷಿನ ಸಂಭಾಷಣೆಗಳಿರುವಲ್ಲಿ ಭಾಷಾಂತರ ಮಾಡಿ ಕನ್ನಡದಲ್ಲಿ ಬರೆಯಿರಿ. (ಯಾವುದೇ ಕನ್ನಡ ಯುನಿಕೋಡ್ ಟೈಪಿಂಗ್ ತಂತ್ರಾಂಶವಾದರೂ ಬಳಸಿ). ಭಾಷಾಂತರ ಅಂದರೆ ಪದಕ್ಕೆ ಪದ ಅನುವಾದ ಮಾಡಬೇಕಂತಿಲ್ಲ. ಸಿನೆಮಾ ನೋಡಿಕೊಂಡು ಸಂದರ್ಭಕ್ಕೆ ತಕ್ಕುನಾಗಿ, ಭಾವಾರ್ಥ ಬರುವಂತೆ, ಕನ್ನಡಕ್ಕೆ ತನ್ನಿ.
4. ಅನಂತರ File - Save As ಕೊಡಿ. ಆಗ ಬರುವ ಡೈಲಾಗ್ ಬಾಕ್ಸಿನಲ್ಲಿ ಕೆಳಗೆ Save as type ಇರುವಲ್ಲಿ All files ಆಯ್ಕೆ ಮಾಡಿ. Encoding ಎಂದು ಇರುವಲ್ಲಿ Unicode ಆಯ್ಕೆ ಮಾಡಿಕೊಳ್ಳಿ. (By default ಅದು ANSI ಎಂದು ಇರುತ್ತದೆ). ಫೈಲಿಗೆ ಹೆಸರು ಕೊಟ್ಟು Save ಮಾಡಿ. ನೆನಪಿರಲಿ, ಆ ಫೈಲ್ extension ಬದಲಾಗಬಾರದು. .SRT ಎಂದೇ ಇರಬೇಕು.
5. ಈಗ ಆ ಫೈಲ್ ತೆರೆದು ಇನ್ನುಳಿದ ಸಂಭಾಷಣೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿ. ಒಮ್ಮೆ ಶುರುಮಾಡಿ ಸ್ವಲ್ಪ ಭಾಷಾಂತರ ಮಾಡಿ ಉಳಿಸಿಟ್ಟರೆ ಮತ್ತೆ ಅದನ್ನು ಯಾವಾಗಬೇಕಾದರೂ ನೋಟ್ ಪ್ಯಾಡಿನಲ್ಲಿ ತೆರೆದು ಕೆಲಸ ಮುಂದುವರೆಸಿ ಮತ್ತೆ ಸೇವ್ ಮಾಡಬಹುದು.

ಇಷ್ಟು ಮಾಡಿದರೆ ಕನ್ನಡ ಅಡಿಬರಹಗಳ ಕಡತ ರೆಡಿ!. ಈ srt ಫೈಲನ್ನು ನಿಮ್ಮಲ್ಲಿರುವ ಸಿನೆಮಾ ಜೊತೆಗೆ ಲೋಡ್ ಮಾಡಿಕೊಂಡು ಕನ್ನಡ ಅಡಿಬರಹಗಳ ಸಮೇತ ನೋಡಬಹುದು.


*******

ಕೆಲವೊಂದು ವೀಡಿಯೋ ಪ್ಲೇಯರ್‍ಗಳಲ್ಲಿ ಈ srt ಫೈಲ್‍ನ ಕನ್ನಡ ಅಕ್ಷರಗಳು ಸರಿಯಾಗಿ ಮೂಡುವುದಿಲ್ಲ. ಉದಾಹರಣೆಗೆ, ಬಹುಪ್ರಚಲಿತ VLC Player.

SRT file on VLC player - Improper font rendering

ಇದರಲ್ಲಿ ಕನ್ನಡ ಸರಿಯಾಗಿ ಮೂಡಬೇಕೆಂದರೆ .ass ಎಂಬ extension ಹೊಂದಿರುವ AdvanceSubstationAlpha ಎಂಬ ಫೈಲ್ ಮಾದರಿ ಬಳಸಬೇಕು. ಹಾಗಾಗಿ srt ಫೈಲನ್ನು ass ಕಡತವಾಗಿ ಪರಿವರ್ತಿಸಬೇಕು. ಇದಕ್ಕೆ Subtitle Edit ಅನ್ನುವ ತಂತ್ರಾಂಶವೊಂದಿದೆ. ಅದನ್ನು ಅಳವಡಿಸಿಕೊಂಡು ಅದರಲ್ಲಿ srt file ತೆರೆದು save as ಕೊಟ್ಟು .ass file ಎಂದು ಸೇವ್ ಮಾಡಿದರೆ ಮುಗಿಯಿತು. ಈಗ ಆ .ass ಫೈಲನ್ನು ವಿ.ಎಲ್.ಸಿ.ಯಲ್ಲಿ ಸಿನೆಮಾ ಜೊತೆ ಲೋಡ್ ಮಾಡಿದರೆ ಸುಂದರ ಕನ್ನಡ ಅಕ್ಷರಗಳು ಕಾಣುತ್ತವೆ.

ASS file on VLC Player - Proper font rendering

ಅಡಿಬರಹದ ಅಕ್ಷರಗಳ ಗಾತ್ರವನ್ನು ಬೇಕಾದರೆ ಬದಲಾಯಿಸಿಕೊಳ್ಳಬಹುದು. ass ಫೈಲನ್ನು ನೋಟ್ ಪ್ಯಾಡಿನಲ್ಲಿ ತೆರೆದು ಫಾಂಟ್ ಗಾತ್ರ ಹೆಚ್ಚು/ಕಡಿಮೆ ಮಾಡಿಕೊಳ್ಳಿ. ಬೇಕಿದ್ದರೆ ಬೇರೆ ಫಾಂಟ್ ಹೆಸರನ್ನು ಕೊಡಬಹುದು. ನಿಮ್ಮ ಸಿಸ್ಟಮ್ಮಲ್ಲಿ ಆ ಫಾಂಟ್ ಇರಬೇಕಷ್ಟೆ. ಇಲ್ಲದಿದ್ದಲ್ಲಿ ಅದು ನಿಮ್ಮ ಗಣಕದ ಕಾರ್ಯಾಚರಣ ವ್ಯವಸ್ಥೆಯ default ಫಾಂಟನ್ನು ತೆಗೆದುಕೊಳ್ಳುತ್ತದೆ. ಉದಾ: ವಿಂಡೋಸ್‍ಗೆ 'ತುಂಗಾ'

Open with notepad and change font size

ಇದೇ ರೀತಿಯಲ್ಲಿ ಯಾವುದೇ ವೀಡಿಯೋಗಳಿಗೆ ಹೊಸದಾಗಿ ಕನ್ನಡದಲ್ಲೇ ನೇರವಾಗಿ ಅಡಿಬರಹ ರೂಪಿಸಬಹುದು. ವೀಡಿಯೋ ನೋಡುತ್ತಾ ಪ್ರತಿಯೊಂದು ಸಂಭಾಷಣೆಯ ಶುರು ಮತ್ತು ಕೊನೆಯಾಗುವ ಸಮಯ ದಾಖಲಿಸಿಕೊಂಡು ಅದಕ್ಕೆ ತಕ್ಕನಾಗಿ ಅಡಿಬರಹ ಬರೆಯಬೇಕಾಗುತ್ತದೆ. ನೋಟ್ ಪ್ಯಾಡ್‍ನಲ್ಲೇ ಮೇಲೆ ತೋರಿಸಿರುವ ಮಾದರಿಯಲ್ಲೇ ರಚಿಸಿದರಾಯಿತು. ಉಳಿಸುವಾಗ srt file extension ಇರಬೇಕು. ಈಗಾಗಲೇ ಉಪಶೀರ್ಷಿಕೆಗಳ ಕಡತ ಇಲ್ಲದಿದ್ದಲ್ಲಿ ಆ ವೀಡಿಯೋದಲ್ಲಿನ ಮಾತುಗಳು ಮತ್ತು ಶಬ್ದಗಳ ಸಮಯ ಮಾಹಿತಿಯನ್ನು (ವಾಯ್ಸ್/ಸೌಂಡ್ ಟ್ರ್ಯಾಕ್ ಮಾಹಿತಿ) ಒಟ್ಟಿಗೇ ಪಡೆಯಲೂ ಯಾವುದಾದರೂ ತಂತ್ರಾಂಶ ಇರಬಹುದು. ವೃತ್ತಿಪರರಲ್ಲಿ ಕೇಳಿದರೆ ಗೊತ್ತಾಗುತ್ತದೆ. ಆ ಮಾಹಿತಿ ಸಿಕ್ಕಿದರೆ ವೀಡಿಯೋವನ್ನು ನೋಡುತ್ತಾ ಸಂಭಾಷಣೆ/ನಿರೂಪಣೆಯ ಸಮಯಗಳನ್ನು ನೋಟ್ ಮಾಡಿಕೊಳ್ಳುವ ಕೆಲಸ ತಪ್ಪುತ್ತದೆ.


 • Subscene, opensubtitles, moviesubtitles ಮುಂತಾದ ಉಪಶೀರ್ಷಿಕೆಗಳ ಜಾಲತಾಣಗಳಲ್ಲಿ ಕನ್ನಡ ಫೈಲುಗಳನ್ನು ಅಪ್ಲೋಡ್ ಮಾಡಲು ಅಲ್ಲಿ ಕನ್ನಡ ಭಾಷೆಯ ಆಯ್ಕೆ ಇಲ್ಲ. cinemasubtitles.com ಎಂಬ ತಾಣದಲ್ಲಿ ಕನ್ನಡ ಆಯ್ಕೆ ಇದೆ. ನಾವು ರಚಿಸುವ ಕನ್ನಡ ಅಡಿಬರಹಗಳ ಫೈಲುಗಳನ್ನು ಅಲ್ಲಿಗೆ ಹಾಕಬಹುದು.
 • Subtitle workshop, Subtitle Edit ಎಂಬ ಟೂಲ್‍ಗಳು ಈ ಸಬ್ ಟೈಟಲ್ ರಚನೆಗೆ, ಎಡಿಟಿಂಗಿಗೆ, ವೀಡಿಯೋ ಹೊಂದಾಣಿಕೆಗೆ, ಪರೀಕ್ಷೆಗೆ ಬೇಕಾದ ಹಲವು advanced ಸೌಲಭ್ಯಗಳನ್ನು ಹೊಂದಿವೆ. ಆಸಕ್ತರು ಪ್ರಯತ್ನಿಸಬಹುದು. Subtitle Edit ಚೆನ್ನಾಗಿದೆ. ಇನ್ನೂ ಹಲವು ಇಲ್ಲಿವೆ: Top 10 Subtitle Editor Tools
 • ಸಬ್‍ಟೈಟಲ್ಸ್ ಹೊಂದಿರುವ DVD VOB ಮುಂತಾದ ಇನ್ನಿತರ ನಮೂನೆಗಳ ವೀಡಿಯೋಗಳಿಂದ ಸಬ್‍ಟೈಟಲ್ ಗಳನ್ನು extract ಮಾಡಲು Subrip, Subtitle Edit ಮುಂತಾದ ತಂತ್ರಾಂಶಗಳನ್ನು ಪ್ರಯತ್ನಿಸಬಹುದು. (ಎಲ್ಲಾ ವೀಡಿಯೋಗಳಲ್ಲೂ ಇದು ಸಾಧ್ಯವಾಗುವುದಿಲ್ಲ)
 • ವೀಡಿಯೋಗಳನ್ನು ಬೇರೆಬೇರೆ ಮಾದರಿಗಳಿಗೆ ಪರಿವರ್ತಿಸಲು ಮತ್ತು ಉಪಶೀರ್ಷಿಕೆಗಳನ್ನು ವೀಡಿಯೋ ಜೊತೆಗೇ ಸೇರಿಸಿ integrate/embed ಮಾಡಲು FreeMakeVideoConverter, WonderShareVideoConverter ಮುಂತಾದ ತಂತ್ರಾಂಶಗಳನ್ನು ಬಳಸಬಹುದು.
 • ಸಬ್‍ಟೈಟಲ್‍ಗಳ ಬಗ್ಗೆ ವಿವರ ಮಾಹಿತಿಗಾಗಿ ವಿಕಿಪೀಡಿಯಾ ಪುಟದ ಕೊಂಡಿ: Subtitle (captioning)
 • Blood Diamond ಸಿನೆಮಾದ ಕನ್ನಡ ಅಡಿಬರಹಗಳು ಇಲ್ಲಿವೆ: Blood Diamond - Kannada Subtitles
 • ಮೇಲಿನ ಮಾಹಿತಿಗಳೆಲ್ಲವೂ Windows operating systemಗೆ ಸಂಬಂಧಿಸಿದಂತದ್ದಾಗಿದೆ. Linux, Mac ಮುಂತಾದ O.S.ಗಳಲ್ಲೂ ಇದೇ ರೀತಿ ಪ್ರಯತ್ನಿಸಬಹುದು.
 • ಇಲ್ಲೊಂದು Online Subtitles Translator & Editor ಇದೆ. ಇದು ಗೂಗಲ್ ಅನುವಾದವನ್ನು ಬಳಸುತ್ತದೆ. ಅದರಲ್ಲಿ ಇಂಗ್ಲೀಷಿನ ಫೈಲನ್ನು ಅಪ್ಲೋಡ್ ಮಾಡಿದರೆ ಕನ್ನಡಕ್ಕೆ ಅನುವಾದಿಸುತ್ತದೆ. ಬೇಕಿದ್ದಲ್ಲಿ ನಾವು ಅದನ್ನು ಆನ್ ಲೈನ್ ಎಡಿಟ್ ಮಾಡಿ ಸೇವ್ ಮಾಡಿಕೊಳ್ಳಬಹುದು. ಆದರೆ ಗೂಗಲ್ ಅನುವಾದ ಅಷ್ಟು ಸರಿಯಾಗಿರುವುದಿಲ್ಲ.
 • ಕನ್ನಡ ಉಪಶೀರ್ಷಿಕೆಗಳನ್ನು ಬರೆಯಲು ಆಸಕ್ತಿ ಇರುವವರಿಗಾಗಿ, ಮಾಹಿತಿಗಳ ವಿನಿಮಯಕ್ಕೆ, ಚರ್ಚೆಗೆ ಫೇಸ್‍ಬುಕ್ ಗುಂಪೊಂದನ್ನು ರಚಿಸಲಾಗಿದೆ. ಆಸಕ್ತರು ಈ ಗುಂಪನ್ನು ಸೇರಬಹುದು: Kannada Subtitles - ಕನ್ನಡ ಅಡಿಬರಹಗಳು
- ವಿಕಾಸ್ ಹೆಗಡೆ (vikashegde82@gmail.com)

ಅಡಿಬರಹಗಳೊಂದಿಗೆ 'ಅಪೊಕ್ಯಾಲಿಪ್ಟೋ' ಚಿತ್ರದ ಕೆಲವು ಸ್ಕ್ರೀನ್ ‍ಶಾಟ್ಸ್